Yakshagana Kalaranga

ಯಕ್ಷ ಕಲಾತಪಸ್ವಿ ಕುಂಬ್ಳೆ ಸುಂದರ ರಾಯರಿಗೆ ಶ್ರದ್ಧಾಂಜಲಿ

ಆರು ದಶಕಗಳ ಕಾಲ ತಮ್ಮ ಮಾತಿನ ಮೋಡಿಯಿಂದ ಯಕ್ಷರಂಗವನ್ನು ಆಳಿದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾಯರಿಗೆ ನಾಗರಿಕ ಶ್ರದ್ಧಾಂಜಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 01-12-2022ರಂದು ಜರಗಿತು.

ಪ್ರಸಂಗಕರ್ತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಿ.ಎಸ್ ಶ್ರೀಧರ್ ಅವರು ಕುಂಬಳೆಯವರ ಮಾತಿನ ಪ್ರೌಢಿಮೆಯನ್ನು ಯಕ್ಷಗಾನ ಬಯಲಾಟ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಪಾರ್ತಿಸುಬ್ಬ ಪ್ರಶಸ್ತಿಯ ಸ್ಥಾಪನೆ, ಹಿಂದೆ ಇದ್ದ ಪ್ರಶಸ್ತಿಯ ಸಂಖ್ಯೆ ಮತ್ತು ಮೊತ್ತವನ್ನು ವೃದ್ಧಿಸುವಲ್ಲಿ ಅವರು ಮಾಡಿದ ಪ್ರಯತ್ನ, ಯಕ್ಷೋಪಾಸಕರು ಪುಸ್ತಕ ಪ್ರಕಟಣೆ, ಕಲಾವಿದರಿಗೆ ತರಬೇತಿ ಕಮ್ಮಟ ಇದನ್ನೆಲ್ಲಾ ಸ್ಮರಿಸಿಕೊಂಡು ಕಲಾವಿದರಾಗಿ, ಸಂಘಟಕರಾಗಿ ಅವರು ಮಾಡಿದ ಕಾರ್ಯಗಳನ್ನು ಶ್ಲಾಘಿಸಿದರು.

ಕುಂಬ್ಳೆಯವರ ಸಹಕಲಾವಿದ ತಾರಾನಾಥ ವರ್ಕಾಡಿಯವರು ಮಾತಿನಿಂದಲೇ ಪಾತ್ರಗಳನ್ನು ಕಟ್ಟಿಕೊಡುತ್ತಿದ್ದ ಪರಿಯನ್ನು ನೆನಪಿಸಿಕೊಂಡರು. ಮಲ್ಪೆ ಶಂಕರನಾರಾಯಣ ಸಾಮಗರಿಂದ ಆರಂಭವಾದ ಮಾತಿನ ವೈಖರಿ ಯಕ್ಷಗಾನ ರಂಗದಲ್ಲಿ ಮುಂದುವರಿಯಲು ಕುಂಬ್ಳೆಯವರ ಕೊಡುಗೆ ಅಸಾಧಾರಣವೆಂದು ಬಣ್ಣಿಸಿದರು. ಕಿಲ್ಲೆಯವರು ಆರಂಭಿಸಿದ ಪ್ರಾಸಬದ್ಧ ಮಾತುಗಾರಿಕೆಯ ನಡೆಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದರು ಎಂದು ಅಭಿಪ್ರಾಯಪಟ್ಟರು ಹಿರಿಯ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾವ್ ಮಾತನಾಡಿ ಅವರು ರಂಗದಲ್ಲಿ ಸಹಕಲಾವಿದನನ್ನು ಉತ್ತೇಜಿಸುತ್ತಾ ಪ್ರಸಂಗವನ್ನು ಸುಂದರವಾಗಿ ಕೊಂಡು ಹೋಗುತ್ತಿದ್ದುದನ್ನು ಸ್ಮರಿಸಿಕೊಂಡರು. ವಾಸುದೇವ ಭಟ್ ಪೆರಂಪಳ್ಳಿಯವರು ಸಂಸ್ಕಾರ ಭಾರತಿಯ ಮೂಲಕ ಅವರು ನಮ್ಮ ಸಂಸ್ಕೃತಿಗೆ ನೀಡಿದ ಕೊಡುಗೆಯ ಕುರಿತು ಮಾತನಾಡಿದರು. ಅಗಲಿದ ಚೇತನಕ್ಕೆ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

We're currently hard at work gathering information and crafting content to bring you the best experience. Stay tuned for exciting updates!