ಯಕ್ಷಗಾನದಂತಹ ಕಲೆ ಕಲಿಕೆಗೆ ಪೂರಕ
ಯಕ್ಷಗಾನ ಕಲೆ ಕಲಿಕೆಗೆ ಪೂರಕವಾಗಿದೆ. ಈ ಕಲೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನುಡಿದರು. ಅವರು ಉಡುಪಿ ಯಕ್ಷಶಿಕ್ಷಣ ಟ್ರಸ್ಟ್‌ನ ಕಿಶೋರ ಯಕ್ಷಗಾನ ಸಂಭ್ರಮ-2022ನ್ನು ನವೆಂಬರ್ 27 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅನುಗ್ರಹಿಸಿದರು. ಯಕ್ಷಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಉದ್ಯಮಿ ಪುರುಷೋತ್ತಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಭಾಗವಹಿಸಿದ್ದರು. ಟ್ರಸ್ಟ್ ನ ಉಪಾಧ್ಯಕ್ಷರಾದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಹಾಗೂ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಉಪಸ್ಥಿತರಿದ್ದರು. ಉಡುಪಿ ಸನಿಹದ 30 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಡಿಸೆಂಬರ್ 11ರ ತನಕ ರಾಜಾಂಗಣದಲ್ಲಿ ಪ್ರದರ್ಶನಗಳು ನಡೆಯಲಿವೆ. ಉಳಿದ 15 ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಪ್ರದರ್ಶನ ಡಿಸೆಂಬರ್ 13 ರಿಂದ 20 ರ ತನಕ ಬ್ರಹ್ಮಾವರದಲ್ಲಿ ಜರಗಲಿದೆ. ಈ ಮಹಾ ಅಭಿಯಾನದಲ್ಲಿ 45 ಶಾಲೆಗಳ ಸುಮಾರು 1300 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನೆಯ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳಿಂದ ಯಕ್ಷಗಾನ ‘ಮಾಯಾಪುರಿ ಮಹಾತ್ಮ್ಯೆ’ ಹಾಗೂ ಸರಕಾರಿ ಪ್ರೌಢ ಶಾಲೆ, ಇಂದಿರಾನಗರ ವಿದ್ಯಾರ್ಥಿಗಳಿಂದ ಯಕ್ಷಗಾನ ‘ವಿದ್ಯುನ್ಮತಿ ಕಲ್ಯಾಣ’ ಪ್ರದರ್ಶನಗೊಂಡವು ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.