ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ಒಟ್ಟು ಐದು ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಪ್ರಾಯೋಜಕತ್ವದ ಎರಡು ಮನೆಗಳ ಉದ್ಘಾಟನೆಯು 23-05-2022 ರಂದು ನೆರವೇರಿತು.
ದ್ವಿತೀಯ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ ಗಂಗೊಳ್ಳಿಯ ಸ್ವಾತಿ ಖಾರ್ವಿ ಹಾಗೂ ದ್ವಿತೀಯ ಬಿ.ಕಾಂ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈತ್ತಿರುವ ವಡ್ಡರ್ಸೆಯ ಚೈತ್ರಾ ಮತ್ತು ರಕ್ಷಿತಾ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾಗಿದ್ದು, ಇವರಿಗೆ ಸಂಸ್ಥೆ ನಿರ್ಮಿಸಿ ಕೊಟ್ಟ ಮನೆಗಳಾಗಿವೆ. ಗಂಗೊಳ್ಳಿಯ ಮನೆಯ ಉದ್ಘಾಟನೆಯನ್ನು ಬೈಂದೂರಿನ ಶಾಸಕರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ನೆರವೇರಿಸಿ ವಿದ್ಯಾಪೋಷಕ್ನ ಅತ್ಯಂತ ಹೆಚ್ಚಿನ ಫಲಾನುಭವಿ ವಿದ್ಯಾರ್ಥಿಗಳು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ ಎಂದು ತಿಳಿದು ಸಂತೋಷವಾಯಿತು, ಸಂಸ್ಥೆಯ ಚಟುವಟಿಕೆಗಳಿಗೆ ಸದಾ ತನ್ನ ಬೆಂಬಲವಿರುವುದಾಗಿ ತಿಳಿಸಿದರು. ಅಭ್ಯಾಗತರಾಗಿ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ರೊ. ಗಣೇಶ್ ಕಾಮತ್ ಉಪಸ್ಥಿತರಿದ್ದು, ಸಂಸ್ಥೆಯ ಚಟುವಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ವಡ್ಡರ್ಸೆಯ ಮನೆಯ ಉದ್ಘಾಟನೆ ಸಂದರ್ಭದಲ್ಲಿ ಅಭ್ಯಾಗತರಾಗಿ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀ ಎಚ್. ಶ್ರೀಧರ ಹಂದೆ ಉಪಸ್ಥಿತರಿದ್ದು ಇದು ನಿಜಾರ್ಥದಲ್ಲಿ ಯಕ್ಷಗಾನ ಕಲಾರಂಗ ಮಾಡುವ ಕೆಲಸ ದೇವರು ಮೆಚ್ಚುವ ಕೆಲಸ, ಬಡವರ ಕಣ್ಣೀರೊರೆಸುವ ಇಂಥಹ ಮಹಾಯಜ್ಞ ಕೈಗೊಂಡಿರುವ ಸಂಸ್ಥೆಗೆ ಉತ್ತರೋತ್ತರ ಶ್ರೇಯಸ್ಸಾಗಲೆಂದು ಶುಭ ಹಾರೈಸಿದರು. ಪ್ರಾಯೋಜಕರಾದ ಬೆಂಗಳೂರಿನ ಉದ್ಯಮಿ ಶ್ರೀ ಎಚ್. ಎಸ್. ಶೆಟ್ಟಿಯವರು ಸಂಸ್ಥೆಯ ನಿಸ್ಪ್ರಹ ಸೇವೆಯನ್ನು ಮನಸಾರೆ ಕೊಂಡಾಡಿ, ಇದೊಂದು ಆದರ್ಶ ಸಂಸ್ಥೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾನು ಸದಾ ಈ ಸಂಸ್ಥೆಯೊಂದಿಗೆ ಇರುವುದಾಗಿ ತಿಳಿಸಿದರು. ಇವು ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ 27 ಮತ್ತು 28ನೆಯ ಮನೆಗಳಾಗಿವೆ. ಈ ಸಂದರ್ಭಗಳಲ್ಲಿ ಹಾಲಾಡಿ ನಾಗರಾಜ ಶೆಟ್ಟಿ, ಉದ್ಯಮಿ ಯು. ವಿಶ್ವನಾಥ ಶೆಣೈ, ಕಲಾರಂಗದ ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿ, ಕಾರ್ಯಕರ್ತರಾದ ಭುವನಪ್ರಸಾದ ಹೆಗ್ಡೆ, ಎಚ್. ಎನ್. ಶೃಂಗೇಶ್ವರ, ವಿದ್ಯಾಪ್ರಸಾದ್, ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಸಂತೋಷ್ ಕುಮಾರ್ ಶೆಟ್ಟಿ, ಸುಜಯೀಂದ್ರ ಹಂದೆ, ಪಿ. ಕಿಶನ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಮ್. ಹೆಗಡೆ ವಂದಿಸಿದರು.