ಉಡುಪಿ : ಯಕ್ಷಗಾನ ಕಲಾರಂಗ ಉಡುಪಿಯ ವಿದ್ಯಾಪೋಷಕ್ ಫಲಾನುಭವಿ ಅಕ್ಷಯ್ ಕುಮಾರ್ ಮತ್ತು ಅವನ ತಂದೆ ಯಕ್ಷಗಾನ ಹಿಮ್ಮೇಳವಾದಕ ಹೆರಂಜಾಲು ಬಾಲಕೃಷ್ಣ ಗಾಣಿಗ ಇವರಿಗೆ ನಾಗೂರಿನಲ್ಲಿ ನಿರ್ಮಿಸಿಕೊಟ್ಟ ಮನೆ ‘ಸಾಯಿಮಯಿ’ಯ ಹಸ್ತಾಂತರ ಕಾರ್ಯಕ್ರಮ 20-03-2022 ರಂದು ಜರಗಿತು. ಪ್ರಾಯೋಜಕರಾದ ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ.ಎನ್.ಭಟ್, ಇವರು ಜ್ಯೋತಿಬೆಳಗಿಸಿ ಉದ್ಘಾಟಿಸಿ, ಈ ಮನೆಯಲ್ಲಿ ನೆಮ್ಮದಿಯಿಂದ ಬದುಕಿ, ದೊಡ್ಡ ಸಾಧನೆಮಾಡಿ, ಉಳಿದವರಿಗೆ ಆಸರೆಯಾಗಬೇಕೆಂದು ಅಕ್ಷಯನಿಗೆ ಕಿವಿಮಾತು ಹೇಳಿದರು. ಮುಖ್ಯ ಭ್ಯಾಗತರಾಗಿ ಆಗಮಿಸಿದ ಸಂಸ್ಥೆಯ ದಾನಿ ಪಿ.ಗೋಕುಲನಾಥ ಪ್ರಭು ಮಾತನಾಡಿ ತಮ್ಮ ಮಾತೃಶ್ರೀಯವರ 100ನೇ ವರ್ಷದ ಪ್ರಯುಕ್ತ ಒಂದು ಮನೆಯನ್ನು ಸಂಸ್ಥೆಯ ಮೂಲಕ ನಿರ್ಮಿಸಿ ಕೊಡಬೇಕೆಂದು ಸೊಂಕಲ್ಪಿಸಿರುವುದಾಗಿ ತಿಳಿಸಿದರು. ಪ್ರೊ. ಎಂ.ಎಲ್ ಸಾಮಗ ಡಾ. ಜೆ.ಎನ್.ಭಟ್ ಇವರನ್ನು ಪರಿಚಯಿಸಿದರು. ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ, ಕಲಾವಿದ ಹೆರಂಜಾಲು ಗೋಪಾಲ ಗಾಣಿಗ ಮತ್ತು ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸುತ್ತಾ ಸಂಸ್ಥೆಯ ಕೆಲಸಕ್ಕೆ ಸಮಾಜದ ದಾನಿಗಳು ಮುಕ್ತ ಹಸ್ತದಿಂದ ಸಹಾಯ ಮಾಡುತ್ತಿರುವುದನ್ನು ನೆನಪಿಸಿಕೊಂಡು ಪಿ.ಗೋಕುಲನಾಥ ಪ್ರಭು,ಡಾ.ಜೆ.ಎನ್.ಭಟ್ ರಂತಹ ದಾನಿಗಳು ಸಂಸ್ಥೆಯ ಆಸ್ತಿ ಎಂದು ಹೇಳಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಯಕ್ಷಗಾನ ಕಲಾರಂಗ ವಿದ್ಯಾಪೊಷಕ್ ವಿದ್ಯಾರ್ಥಿಗಳಿಗೆ ನಿರ್ಮಿಸಿದ 24ನೇ ಮನೆಯಾಗಿದೆ.