ಹೊಸದಾಖಲೆ ನಿರ್ಮಿಸಿದ ಕೋಳ್ಯೂರು ವೈಭವ ಡಾ. ಕೋಳ್ಯೂರು ರಾಮಚಂದ್ರ ರಾವ್ ಯಕ್ಷಗಾನರಂಗ ಕಂಡ ಅಪೂರ್ವ ಕಲಾಪ್ರತಿಭೆ. ಯಕ್ಷಗಾನ ಆಕಾಶದಲ್ಲಿ ಬೆಳಗಿದ ಹೊಳಪಿನ ತಾರೆ. ಸುಮಾರು ಆರು ದಶಕ ಯಕ್ಷಸಾಮ್ರಾಜ್ಯ ಆಳಿದ ಸಾಮ್ರಾಜ್ಞಿ. ಯೋಗ, ಯೋಗ್ಯತೆ, ಆಯುಷ್ಯ, ಆರೋಗ್ಯ ಇವೆಲ್ಲ ಏಕತ್ರ ಸೇರಿಕೊಂಡಿರುವ ಅಪರೂಪದ ಕಲಾವಿದ. ಅವರ ನವತ್ಯಬ್ದ ಸಂಭ್ರಮವನ್ನು ಉಡುಪಿಯ ಯಕ್ಷಗಾನ ಕಲಾರಂಗ, ಅವರ ಮಕ್ಕಳ ಪೂರ್ಣ ಸಹಕಾರದೊಂದಿಗೆ ವಿಶಿಷ್ಟವಾಗಿ ಆಯೋಜಿಸಿತು. ಅಕ್ಟೋಬರ್ 14ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು ನಿರಂತರ ಒಂದು ತಿಂಗಳು ನೆಡೆಸಲು ಯೋಜಿಸಿದ ಸರಣಿ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾಯರ ಪರಿಚಯ ಮತ್ತು ಕಲಾಸಂಬಂಧಿ ವಿವರ ಒಳಗೊಂಡ ಜಾಲತಾಣ ‘ಕ್ವೀನ್ ಆಫ್ ಯಕ್ಷಗಾನ’ವನ್ನು ಪೂಜ್ಯ ಖಾವಂದರು ಲೋಕಾರ್ಪಣೆಗೈದರು. ಅಂದು ಆರಂಭಗೊಂಡ ಕೋಳ್ಯೂರು ವೈಭವದ ಕಲಾಪರ್ವ ನವೆಂಬರ್ 14ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಿನಪೂರ್ತಿ ಕಾರ್ಯಕ್ರಮದೊಂದಿಗೆ ಸಮಾಪನಗೊಂಡಿತು. ನಿರಂತರ ಒಂದು ಮಾಸದ ಪಯರ್ಂತ ಜರಗಿದ ಕಾರ್ಯಕ್ರಮ ಎಂದೂ ಮಾಸದ ನೆನಪಾಗಿ ಇತಿಹಾಸ ಸೃಷ್ಟಿಸಿತು. ಕೋಳ್ಯೂರು ವೈಭವವನ್ನು ಹೊಸ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿತ್ತು. ತಂತ್ರಜ್ಞಾನ ಬಳಸಿಕೊಂಡು ಯುಟ್ಯೂಬ್ ವಾಹಿನಿ ಮೂಲಕ ಪ್ರತಿನಿತ್ಯ ಸಂಜೆ ಕಲಾಸಕ್ತರನ್ನು ತಲಪಲಾಗುತ್ತಿತ್ತು. ಇದು ದಿನಕ್ಕೊಬ್ಬರಂತೆ ಕೋಳ್ಯೂರರ ಒಡನಾಟದ ಗತಿಸಿದ ಹಿರಿಯ ಕಲಾವಿದರ ನೆನಪಿಗೆ ಸಮರ್ಪಿಸುತ್ತಾ ಸಾಗಿತು. ಪ್ರತಿನಿತ್ಯ ಮಠಾಧಿಪತಿಗಳು, ಯಕ್ಷಗಾನ ವಿದ್ವಾಂಸರು, ಮೇಳದ ಯಜಮಾನರು, ಸಹ ಕಲಾವಿದರು ಸೇರಿದಂತೆ ಒಬ್ಬರು ಅಥವಾ ಇಬ್ಬರು ಕೋಳ್ಯೂರರನ್ನು ಅಭಿನಂದಿಸಿ ಅವರ ಕಲಾವ್ಯಕ್ತಿತ್ವದ ಕುರಿತು ಹತ್ತು ಹದಿನೈದು ನಿಮಿಷ ಮಾತನಾಡುತ್ತಿದ್ದರು. ಆಮೇಲೆ ಕೋಳ್ಯೂರರು ಭಾಗವಹಿಸಿದ ಆಟ ಅಥವಾ ಕೂಟದ ಪ್ರಸಂಗ ಪ್ರಸಾರವಾಗುತ್ತಿತ್ತು. ಇದನ್ನು ಪ್ರತಿದಿನ ವೀಕ್ಷಿಸುತಿದ್ದ ಸಹೃದಯರ ಪ್ರತಿಕ್ರಿಯೆ ಸಂಯೋಜಕರಲ್ಲಿ ಸಾರ್ಥಕ್ಯದ ಭಾವ ಮೂಡುವಂತೆ ಮಾಡಿತು. ನವೆಂಬರ್ 14ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 9-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ನಿರಂತರ ಹನ್ನೆರಡು ತಾಸು ಕೋಳ್ಯೂರು ಕಲಾಯಾನ ಪರ್ವದ ಸಮಾಪನ ಸಮಾರಂಭ ಸಂಪನ್ನಗೊಂಡಿತು. ಒಟ್ಟು ಹತ್ತು ಕಲಾಪಗಳು ಜರಗಿದವು. ಬೆಳಗ್ಗೆ 9-00 ಗಂಟೆಗೆ ಖ್ಯಾತ ವೀಣಾವಾದಕಿ ಐಶ್ವರ್ಯಾ ಮಣಿಕರ್ಣಿಕಾ ಅವರ ಮೋಹನ ರಾಗ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. 10-00 ಗಂಟೆಗೆ ಶ್ರೀ ಸೋದೆ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥರ ದಿವ್ಯ ಸಾನ್ನಿಧ್ಯದಲ್ಲಿ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರು ಕಾರ್ಯಕ್ರಮ ಉದ್ಘಾಟಿಸಿದರು. ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವ ವಿದ್ಯಾಲಯ ಪರೀಕ್ಷಾಂಗ ಕುಲಸಚಿವರಾದ ಡಾ. ಪಿ. ಎಲ್. ಧರ್ಮ ಶುಭಾಶಂಸನೆ ಗೈದರು. ಮಧ್ಯಾಹ್ನ 11-00 ಗಂಟೆಗೆ ವಿದ್ವತ್ ಗೌರವ ಕಲಾಪದಲ್ಲಿ ಬಹುಭಾಷಾ ವಿದ್ವಾಂಸ ಪಪ್ಪು ವೇಣುಗೋಪಾಲ ರಾವ್ ಅವರು ಆನ್ ಲೈನ್ ನೇರ ಪ್ರಸಾರದಲ್ಲಿ ಪ್ರದರ್ಶನ ಕಲೆಗಳಲ್ಲಿ ಪುರುಷರು ವಹಿಸುವ ಸ್ತೀಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಸಿ ಕೊಟ್ಟರು. 12-00 ಗಂಟೆಗೆ ಜರಗಿದ ನುಡಿ ಗೌರವ ಕಲಾಪದಲ್ಲಿ ಸಿರಿಬಾಗಿಲು ರಾಮಕಷ್ಣ ಮಯ್ಯ, ಸೂರ್ಯನಾರಾಯಣ ಭಟ್, ಭೋಜರಾಜ ವಾಮಂಜೂರು, ಕಷ್ಣಪ್ರಕಾಶ ಉಳಿತ್ತಾಯ, ಶಶಿಕಾಂತ ಶೆಟ್ಟಿ, ಅಮ್ಮುಂಜೆ ಮೋಹನ ಕುಮಾರ್ ಭಾಗವಹಿಸಿದ್ದರು. ಪಟ್ಲ ಸತೀಶ ಶೆಟ್ಟಿ ಗೋಷ್ಠಿಯ ಸಮನ್ವಯಕಾರರಾಗಿದ್ದರು. ಅಪರಾಹ್ನ 1-00 ಗಂಟೆಗೆ ಬಲಿಪ ಶಿವಶಂಕರ ಭಟ್ ಅವರು ಪರಂಪರೆಯ ಶೈಲಿಯಲ್ಲಿ ಯಕ್ಷಗಾನದ ಹಾಡುಗಳನ್ನು ಹಾಡಿದರು. 2-00 ಗಂಟೆಗೆ ಕೋಳ್ಯೂರರ ಆತ್ಮಕಥನ ವಾಚನವನ್ನು ರಾಜೇಂದ್ರ ಕಾರಂತ ಮತ್ತು ಮಂಜುಳಾ ಸುಬ್ರಹ್ಮಣ್ಯ ಮಾಡಿದರು. ಅಪರಾಹ್ನ 2-30 ರಿಂದ ಪ್ರವೃತ್ತ ನಿವೃತ್ತ ಸ್ತ್ರೀವೇಷಧಾರಿಗಳಿಗೆ ಸ್ಟತಃ ಕೋಳ್ಯೂರರೇ ಶಾಲು, ಸ್ಮರಣಿಕೆ, ನಗದು ಪುರಸ್ಕಾರದೊಂದಿಗೆ ಗೌರವಿಸುವ ಹ್ರದಯಸ್ಪರ್ಶಿ ಕಾರ್ಯಕ್ರಮ ರಾಜಾಂಗಣದ ಪವಿತ್ರ ವೇದಿಕೆಯಲ್ಲಿ ಸಂಪನ್ನಗೊಳ್ಳುತ್ತಿರುವಾಗ ಪ್ರೇಕ್ಷಕರು ಭಾವ ತುಂದಿಲರಾದರು. 27 ವರ್ಷದ ಎಳೆಯ ಕಲಾವಿದರಿಂದ ಹಿಡಿದು 97 ವರ್ಷದ ಮಾರ್ಗೋಳಿ ಗೋವಿಂದ ಸೇರೆಗಾರರವರೆಗೆ ಒಟ್ಟು 98 ಕಲಾವಿದರನ್ನು ಸಮ್ಮಾನಿಸಲಾಯಿತು. ಸಂಜೆ 4-30 ಕ್ಕೆ ಪರ್ಯಾಯ ಅದಮಾರು ಮಠದ ಶ್ರೀಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಆರಂಭವಾಯಿತು. ವಿದುಷಿ ಡಾ. ಪದ್ಮಾ ಸುಬ್ರಹ್ಮಣ್ಯಂ ಮತ್ತು ಡಾ. ಕಲಾಮಂಡಲಂ ಗೋಪಿ ಆನ್ಲೈನ್ ಉಪಸ್ಥಿತಿಯಲ್ಲಿ ಕೋಳ್ಯೂರರರಿಗೆ ಶುಭಾಶಂಸನೆ ಹೇಳಿದರು. ಕೋಳ್ಯೂರರ ಒಡನಾಡಿ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮತ್ತು ಹಿರಿಯ ಸಾಹಿತಿ ಎ. ಪಿ. ಮಾಲತಿಯವರು ಅಭಿನಂದನಾ ಭಾಷಣ ಮಾಡಿದರು. ಯಕ್ಷಗಾನ ಕಲಾರಂಗದ ವತಿಯಿಂದ ಕೋಳ್ಯೂರು ದಂಪತಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿರಿಯ ಚಿಂತಕ ಲಕ್ಷ್ಮೀ ತೋಳ್ಪಡಿತ್ತಾಯರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 5.30 ರಿಂದ ವಸಂತ ಮಂಠಪದಲ್ಲಿ ಕೋಳ್ಯೂರು ಅಭಿಮಾನಿಗಳು ಅವರನ್ನು ಅಭಿನಂದಿಸಿದರು. ಅರ್ಧಗಂಟೆ ಕೋಳ್ಯೂರರ ಸಾಕ್ಷ್ಯ ಚಿತ್ರದ ವೀಕ್ಷಣೆಯ ಅನಂತರ ಸಂಜೆ 7.00 ಗಂಟೆಯಿಂದ 9.00 ಗಂಟೆಯವರೆಗೆ ಕಲಾಮಂಡಲಂ ತಂಡದವರಿಂದ ಕೃಷ್ಣ ಕುಚೇಲ ವೃತ್ತಂ ಎಂಬ ಕಥಕಳಿ ಕಲಾ ಪ್ರದರ್ಶನ ಗೌರವವನ್ನು ಡಾ. ಕೋಳ್ಯೂರರಿಗೆ ಸಮರ್ಪಿಸಲಾಯಿತು. ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ನಡೆದ ಈ ಮೆರಥಾನ ಕಾರ್ಯಕ್ರಮದಲ್ಲಿ ಹಿರಿಯ ಜೀವ ಕೋಳ್ಯೂರರು ಅತ್ಯಂತ ಉತ್ಸಾಹದಿಂದ ಬಂದ ಅತಿಥಿಗಳಿಗೆಲ್ಲ ಶಾಲು ಹೊದೆಸಿ ಗೌರವಿಸುತ್ತಾ ಅಕ್ಷರಾರ್ಥದಲ್ಲಿ ಒಂದು ನಿಮಿಷವೂ ವಿಶ್ರಾಂತಿ ಬಯಸದೇ ಓಡಾಡಿಕೊಂಡಿದ್ದದ್ದು ವಿಶೇಷವಾಗಿತ್ತು. ‘ಕ್ವೀನ್ ಆಫ್ ಯಕ್ಷಗಾನ’ ಜಾಲತಾಣದಲ್ಲಿ ಇಡೀ ಕಾರ್ಯಕ್ರಮ ವೀಕ್ಷಣೆಗೆ ಲಭ್ಯ. ಈ ಜಾಲತಾಣ ಈ ರೀತಿಯ ಜಾಲತಾಣ ಮಾಡುವವರಿಗೆ ಮಾದರಿಯಾಗಿ ಇತಿಹಾಸ ನಿರ್ಮಿಸಿತು. ಶತಮಾನದ ಕಲಾವಿದನನ್ನು ಗೌರವಿಸಿದ ಸಂತೃಪ್ತಿಯನ್ನು ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಅನುಭವಿಸಿದರು. ಕೋಳ್ಯೂರು ಕುಟುಂಬಸ್ಥರಿಗೆ, ಇಡೀ ಕುಟುಂಬದ ಪ್ರತಿನಿಧಿಯಾಗಿ ತಿಂಗಳುಗಟ್ಟಲೆ ಇದರ ಹಿಂದೆ ಕೆಲಸ ಮಾಡಿದ ಕೋಳ್ಯೂರರ ಸುಪುತ್ರ ಕೋಳ್ಯೂರು ಶ್ರೀಧರ ರಾವ್ ಹಾಗೂ ತಂಡಕ್ಕೆ ಇದೊಂದು ಧನ್ಯತೆಯ, ಕೃತಾರ್ಥತೆಯ ಭಾವವನ್ನು ಉಂಟುಮಾಡಿತು.