ಉಡುಪಿ : ಮಂದಾರ್ತಿ ಮೇಳದ ಕಲಾವಿದ ಚಂದ್ರ ನಾಯ್ಕ ಹಾಗೂ ಮಕ್ಕಳಾದ ಯಕ್ಷಗಾನ ಕಲಾರಂಗದ ಉದ್ಯೋಗಿ ಸಂಗೀತಾ ಮತ್ತು ದ್ವಿತಿಯ ಪಿ.ಯು.ಸಿ ಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಗೀತಾ ಇವರ ಕುಟುಂಬಕ್ಕೆ, ಮೈಸೂರು ಮರ್ಕಂಟೈಲ್ ಕಂಪನಿ ಲಿ. ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಚ್. ಎಸ್. ಶೆಟ್ಟಿ ಬೆಂಗಳೂರು ಇವರ ನೆರವಿನಿಂದ ಮಂದಾರ್ತಿಯಲ್ಲಿ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ದ ಹಸ್ತಾಂತರ ಕಾರ್ಯಕ್ರಮ ದಿನಾಂಕ 30-09-2021 ರಂದು ಸಂಪನ್ನಗೊಂಡಿತು. ಜ್ಯೋತಿ ಬೆಳಗಿಸಿ, ಮನೆಯನ್ನು ಉದ್ಘಾಟಿಸಿ ಮಾತನಾಡಿದ ಎಚ್. ಎಸ್. ಶೆಟ್ಟರು, ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕ ಯುವತಿಯರು ಹೊಸ ಹೊಸ ಉದ್ಯೋಗವಕಾಶಗಳ ಬಗ್ಗೆ ಯೋಚಿಸಿ ಧೈರ್ಯದಿಂದ ಕಾರ್ಯ ಪ್ರವೃತ್ತರಾಗಬೇಕು. ಈ ಹಿನ್ನಲೆಯಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‍ನೊಂದಿಗೆ ನಾನು ಸದಾ ಕೈಜೋಡಿಸುತ್ತೇನೆ, ಇಂತಹ ಸಮಾಜಮುಖೀ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸುವ ತಂಡವನ್ನು ನಾನು ಈ ತನಕ ಬೇರೆಲ್ಲೂ ಕಂಡದ್ದಿಲ್ಲ. ಇನ್ನೂ ನಾಲ್ಕು ಮನೆಗಳ ಪ್ರಾಯೋಜಕತ್ವಕ್ಕೆ ತಾನು ಬದ್ಧ ಎಂದು ನುಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಎಚ್. ಧನಂಜಯ ಶೆಟ್ಟಿ, ಕೆ. ಮಹೇಶ ಉಡುಪ, ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಎಚ್. ನಾಗರಾಜ ಶೆಟ್ಟಿ, ಶೇಡಿಕೋಡ್ಲು ವಿಠಲ ಶೆಟ್ಟಿ ಅಭ್ಯಾಗತರಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿಗಳಾದ ಮನೋಹರ ಕೆ., ಪ್ರೊ. ಕೆ. ಸದಾಶಿವ ರಾವ್ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ಹಾಗೂ ಸಂಸ್ಥೆಯ ಸದಸ್ಯರು, ಯಕ್ಷಗಾನ ಕಲಾವಿದರು ಪಾಲುಗೊಂಡರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಮನೆ ಉದ್ಘಾಟನೆಯ ಪೂರ್ವದಲ್ಲಿ ಮಂದಾರ್ತಿ ದೇವಳಕ್ಕೆ ಭೇಟಿ ನೀಡಿದ ಸಂಸ್ಥೆಯ ತಂಡಕ್ಕೆ ಆಡಳಿತ ಮುಕ್ತೇಸರರಾದ ಎಚ್. ಧನಂಜಯ ಶೆಟ್ಟರು ಯಕ್ಷಗಾನ ಪ್ರಿಯೆ ದುರ್ಗಾ ಮಾತೆಯ ಪ್ರಸಾದವನ್ನು ಕೊಡಿಸಿದರು.