ಉಡುಪಿ : ಕರ್ನಾಟಕ ಸರಕಾರದಿಂದ ಕ್ಯಾಬಿನೆಟ್ ಸ್ಥಾನವನ್ನು ಹೊಂದಿದ ಕರ್ನಾಟಕ ಸಾವಯವ ಕೃಷಿ ಮೆಷಿನ್‍ನ ಅಧ್ಯಕ್ಷರಾದ ಶ್ರೀ ಆನಂದ ಆ.ಶ್ರೀ, ಸಾಗರ ಇವರು ಇಂದು (16-09-2021) ಯಕ್ಷಗಾನ ಕಲಾರಂಗದ ಕಚೇರಿಗೆ ಭೇಟಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಗಳು, ಜತೆಗೆ ನಿಟ್ಟೂರು ಪ್ರೌಢಶಾಲೆ ‘ನಿಟ್ಟೂರು ಸ್ವರ್ಣ’ ಮತ್ತು ಕೇದಾರೋತ್ಥಾನ ಟ್ರಸ್ಟ್ ಹೇಗೆ ಹಡಿಲು ಭೂಮಿಯಲ್ಲಿ ಸಾವಯವ ಬೇಸಾಯವನ್ನು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ನಿಟ್ಟೂರು ಪ್ರೌಢಶಾಲೆ ಹಾಗೂ ಕೆ. ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ನಡೆಸುತ್ತಿರುವ ಸಾವಯವ ಬೇಸಾಯ ಅಭಿಯಾನ ರಾಷ್ಟ್ರಕ್ಕೆ ಮಾದರಿ ಎಂದು ಶ್ರೀ ಆನಂದರು ಈ ಸಂದರ್ಭದಲ್ಲಿ ನುಡಿದು, ನಿಮ್ಮೊಂದಿಗೆ ನಮ್ಮ ಸಾವಯವ ಕೃಷಿ ಮಿಷನ್ ಸದಾ ಇರುತ್ತದೆ ಎಂದು ನುಡಿದರು. ಜತೆಗೆ ಯಕ್ಷಗಾನ ಕಲಾರಂಗವು ಕಲೆ, ಕಲಾವಿದರು ಹಾಗೂ ಬಡ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಕಾರ್ಯಚಟುವಟಿಕೆ ಬೆರಗನ್ನು ಉಂಟುಮಾಡುವಂತದ್ದು ಎಂದು ನುಡಿದು ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುರಲಿ ಕಡೆಕಾರ್ ಶ್ರೀ ಆನಂದರನ್ನು ಸಂಸ್ಥೆಯ ವತಿಯಿಂದ ಗೌರವಿಸಿದರು.