ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಯಕ್ಷಗಾನ ಕಲಾರಂಗದಿಂದ ಮನೆ ಹಸ್ತಾಂತರ ಉಡುಪಿ : ಯಕ್ಷಗಾನ ಕಲಾರಂಗ ಕುಂದಾಪುರದ ವಿದ್ಯಾಪೋಷಕ್ ವಿದ್ಯಾರ್ಥಿನಿ ಶ್ರೀನಿಧಿ (IPUC) ಇವಳಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಪಾವನಿ’ ಮನೆಯ ಉದ್ಘಾಟನೆ 17-07-2021 ಶನಿವಾರ ನೆರವೇರಿತು. ಅಭ್ಯಾಗತರಾಗಿ ಮೈಸೂರು ಮರ್ಕಂಟೈಲ್ ಕಂ. ಲಿ. ನ ಆಡಳಿತ ನಿರ್ದೇಶಕರಾದ ಶ್ರೀ ಎಚ್. ಎಸ್. ಶೆಟ್ಟಿ, ಮಂಗಳೂರಿನ ಉದ್ಯಮಿ ಶ್ರೀ ಗೋಕುಲನಾಥ ಪ್ರಭು, ಬೆಂಗಳೂರಿನ ವೈದ್ಯ ವಿಜ್ಞಾನಿ ಡಾ. ರಾಜಾ ವಿಜಯ್ ಕುಮಾರ್, ಮಂಗಳೂರಿನ ವೈದ್ಯರಾದ ಡಾ. ಜೆ.ಎನ್ ಭಟ್, ಗೋವಾದ ಆನಂದ ಸಾಗರ್ ಗ್ರೂಪ್‍ನ ಮಾಲಕರಾದ ರಾಘವ ಎಂ. ಶೆಟ್ಟಿ ಹಾಗೂ ಉದ್ಯಮಿ ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು. ಮನೆಯ ಪ್ರಾಯೋಜಕತ್ವ ವಹಿಸಿದ ಸಂಸ್ಥೆಯ ಅಧ್ಯಕ್ಷರೂ ಆದ ಎಂ. ಗಂಗಾಧರ ರಾವ್ ಹಾಗೂ ಶ್ರೀಮತಿ ಸರಸ್ವತಿ ಜಿ. ರಾವ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಎಚ್.ಎಸ್ ಶೆಟ್ಟಿಯವರು ಕಲಾರಂಗದ ಕಾರ್ಯವೈಖರಿಯನ್ನು ಮೆಚ್ಚಿ ತಾನು ಮುಂದಿನ ದಿನಗಳಲ್ಲಿ 5 ಮನೆಗಳ ಪ್ರಾಯೋಜಕತ್ವವಹಿಸುವ ಭರವಸೆ ನೀಡಿದರು. ಇದೇ ರೀತಿ ಜೆ.ಎನ್. ಭಟ್ ಹಾಗೂ ಡಾ. ರಾಜಾ ವಿಜಯ್ ಕುಮಾರ್ ತಲಾ ಒಂದೊಂದು ಮನೆಯ ಪ್ರಾಯೋಜಕತ್ವದ ಆಶ್ವಾಸನೆ ನೀಡಿದರು. ಫಲಾನುಭವಿ ವಿದ್ಯಾರ್ಥಿ ಶ್ರೀನಿಧಿ ಮಾತನಾಡಿ ಕಷ್ಟದ ಸಂದರ್ಭದಲ್ಲಿ ನನಗೆ ಮನೆ ನಿರ್ಮಿಸಿಕೊಟ್ಟು ನೆರವಾದ ವಿದ್ಯಾಪೋಷಕ್ ಸಂಸ್ಥೆಗೆ ಹಾಗೂ ನನ್ನ ದಾನಿಗಳಿಗೆ ಚಿರಋಣಿಯಾಗಿದ್ದೇನೆ. ಮುಂದೆ ಉದ್ಯೋಗ ದೊರೆತಬಳಿಕ ನನ್ನಂತೆ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗುತ್ತೇನೆ ಎಂದು ಧನ್ಯತೆಯ ಮಾತುಗಳನ್ನಾಡಿದಳು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಸ್.ವಿ ಭಟ್, ವಿ.ಜಿ ಶೆಟ್ಟಿ, ಕೆ. ಮನೋಹರ್, ಪ್ರೊ. ಸದಾಶಿವ ರಾವ್, ಎಚ್.ಎನ್ ಶೃಂಗೇಶ್ವರ ಹಾಗೂ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ಇದು ಸಂಸ್ಥೆ ನಿರ್ಮಿಸಿ ಹಸ್ತಾಂತರಿಸುತ್ತಿರುವ 20ನೇ ಮನೆಯಾಗಿದೆ.