– ವಿಶ್ವವಲ್ಲಭತೀರ್ಥ ಶ್ರೀಪಾದರು
ಉಡುಪಿ : ಪ್ರಶಸ್ತಿಗಾಗಿಯೇ ಕೆಲಸ ಮಾಡಿದರೆ, ಮಾಡುವ ಕೆಲಸದಲ್ಲಿ ಸಂತೋಷವಿಲ್ಲ. ಸಮಾಜಕ್ಕೆ ಸಮರ್ಪಣಾ ಭಾವದಿಂದ ಕಾರ್ಯವೆಸಗಿದರೆ ಸಂತೋಷ, ಕೀರ್ತಿ ಎರಡೂ ಇದೆ. ಅಂಥವರಿಗೆ ಪ್ರಶಸ್ತಿ ಬಂದರೆ ಪ್ರಶಸ್ತಿಗೇ ಮೌಲ್ಯ ಬರುತ್ತದೆ ಎಂದು ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ಹೇಳಿದರು. ಅವರು ಯಕ್ಷಗಾನ ಕಲಾರಂಗವು ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಫೆಬ್ರವರಿ 15, 2020 ರಂದು ಏರ್ಪಡಿಸಿದ್ದ ‘ಸೇವಾಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳಲ್ಲಿ 27 ವರ್ಷ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾಭೂಷಣ’ ಪ್ರಶಸ್ತಿಗೆ ವಿಶೇಷ ಮಹತ್ವವಿದೆ ಎಂದರು. ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ಸಕ್ರಿಯ ಕಾರ್ಯಕರ್ತ ಯು. ಅನಂತರಾಜ ಉಪಾಧ್ಯ ಈ ಪ್ರಶಸ್ತಿ ತನಗೆ ಧನ್ಯತೆ ತಂದಿದೆ ಎಂದು ಹೇಳಿದರು. ಉಪಾಧ್ಯಕ್ಷ ಎಸ್.ವಿ ಭಟ್ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಡಾ. ತಲ್ಲೂರು ಶಿವರಾಮ ಶೆಟ್ಟಿ ಸ್ವಾಮೀಜಿಯವರಿಗೆ ಫಲವಸ್ತು ಸಮರ್ಪಿಸಿದರು. ನಾರಾಯಣ ಎಂ.ಹೆಗಡೆ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಎಚ.ಎನ್ ಶೃಂಗೇಶ್ವರ ವಂದಿಸಿದರು.