ಯಕ್ಷಶಿಕ್ಷಣ ಟ್ರಸ್ಟ್, ಉಡುಪಿ

ಉಡುಪಿಯ ಶಾಸಕರಾದ ಶ್ರೀ. ಕೆ. ರಘುಪತಿ ಭಟ್ ರವರ ಕಲ್ಪನೆಯ ಯಕ್ಷಶಿಕ್ಷಣ ಟ್ರಸ್ಟ್ ಯಕ್ಷಗಾನ ಕಲಾರಂಗದ ಇನ್ನೊಂದು ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಉಡುಪಿ ವಿಧಾನಸಭಾ ವ್ಯಾಪ್ತಿಯ 48 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಜೂನ್ ತಿಂಗಳಿನಿಂದ ನವೆಂಬರ್ ತಿಂಗಳಿನವರೆಗೆ ಪರಿಣಿತ ಯಕ್ಷ ಗುರುಗಳನ್ನು ಶಾಲೆಗಳಿಗೆ ಕಳುಹಿಸಿ ಶಾಲಾ ತರಗತಿಗಳ ಅವಧಿಪೂರ್ವ ಯಾ ಅವಧಿಯ ಬಳಿಕ ಯಕ್ಷನೃತ್ಯ ತರಬೇತಿ ನೀಡಿ, ದಶಂಬರ್ ತಿಂಗಳಿನಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಾಗೂ ಬ್ರಹ್ಮಾವರದ ಬಸ್ಸು ನಿಲ್ದಾಣದ ಬಳಿ ವೇದಿಕೆಯಲ್ಲಿ ಪ್ರದರ್ಶನ ಆಯೋಜಿಸುವ ಸಂಪೂರ್ಣ ಹೊಣೆ ಸಂಸ್ಥೆಯದ್ದು. ಈ ಅಭಿಯಾನದಲ್ಲಿ ಜಾತಿ, ಲಿಂಗ, ಪ್ರಾದೇಶಿಕ ಬೇಧವಿಲ್ಲದೆ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಯಕ್ಷಶಿಕ್ಷಣ ತರಬೇತಿ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗಣನೀಯ ಪ್ರಗತಿ ಕಂಡಿರುತ್ತಾರೆ.

ಸ್ಥಾಪನೆ : 2008

  • ‘ ಯಕ್ಷಶಿಕ್ಷಣ ’ ವು  ಉಡುಪಿ ಶಾಸಕರಾಗಿರುವ ಶ್ರೀ ಕೆ. ರಘುಪತಿ ಭಟ್ ಇವರ ಕಲ್ಪನೆಯ ಸಂಸ್ಥೆ. ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದಿಂದ ಎಳವೆಯಲ್ಲೇ ಪ್ರಭಾವಿತರಾಗಿದ್ದ ಇವರು ತಮ್ಮ ವಿಧಾನ ಸಭಾ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡುವ ಯೋಚನೆಯಿಂದ ಯಕ್ಷಗಾನದ ಬಗ್ಗೆ ಕಾಳಜಿ ಇರುವ ಸಮಾನ ಮನಸ್ಕರನ್ನು ಒಟ್ಟುಗೂಡಿಸಿ  ಒಂದು ಸಂಸ್ಥೆಯನ್ನು ಸ್ಥಾಪಿಸಲು ತೀರ್ಮಾನಿಸಿರುವ ಪರಿಣಾಮವಾಗಿ ಯಕ್ಷಶಿಕ್ಷಣ ಟ್ರಸ್ಟ್ 2008 ರಲ್ಲಿ ಸ್ಥಾಪನೆಯಾಯಿತು.
  • ಉಡುಪಿಯ ಪರ್ಯಾಯ ಮಠಾಧೀಶರು ಗೌರವಾಧ್ಯಕ್ಷರಾಗಿ, ಉಡುಪಿ ವಿಧಾನಸಭಾ ವ್ಯಾಪ್ತಿಯ ಶಾಸಕರು ಅಧ್ಯಕ್ಷರಾಗಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಳಗಳ ಒಕ್ಕೂಟದ ಅಧ್ಯಕ್ಷರು ಮತ್ತು ಪರ್ಯಾಯ ಶ್ರೀಕೃಷ್ಣ ಮಠದ ದಿವಾನರನ್ನು ಉಪಾಧ್ಯಕ್ಷರನ್ನಾಗಿ , ಪದನಿಮಿತ್ತ ಪದಾಧಿಕಾರಿಗಳಲ್ಲದೇ 7 ಮಂದಿ ವಿಶ್ವಸ್ಥರನ್ನು ಹೊಂದಿರುವ ಟ್ರಸ್ಟ್ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಉಡುಪಿ ವಿಧಾನಸಭಾ ವ್ಯಾಪ್ತಿಯ 48 ಪ್ರೌಢಶಾಲೆಗಳಲ್ಲಿ ದೈನಂದಿನ ಶಾಲಾ ಚಟುವಟಿಕೆಗಳಿಗೆ ತೊಡಕಾಗದಂತೆ ವಾರದಲ್ಲಿ ಒಂದೂವರೆ ಘಂಟೆ ಅವಧಿಯ ಕನಿಷ್ಠ ಎರಡು ತರಗತಿಗಳನ್ನು ನಡೆಸಲಾಗುವುದು. ಇದಕ್ಕಾಗಿ 20 ಪರಿಣಿತ ವೃತ್ತಿಪರ ಯಕ್ಷಗುರುಗಳನ್ನು ನೇಮಿಸಿ ಅವರಿಗೆ ತರಗತಿಯೊಂದಕ್ಕೆ ರೂ.500/- ರಂತೆ ಸಂಭಾವನೆ ನಿಗದಿಪಡಿಸಿ ಪ್ರತಿ ತಿಂಗಳು ನೀಡಲಾಗುತ್ತದೆ.  ಜೂನ್ ತಿಂಗಳಲ್ಲಿ ಆರಂಭಿಸುವ ತರಗತಿಗಳನ್ನು ದಶಂಬರ್ ಕೊನೆಯವರೆಗೆ ನಡೆಸಲಾಗುತ್ತದೆ.
  • ದಶಂಬರ್ ತಿಂಗಳಿನಲ್ಲಿ ಪ್ರತಿ ಶಾಲೆಯ ತರಬೇತಿ ಹೊಂದಿದ ವಿದ್ಯಾರ್ಥಿಗಳಿಂದ  ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಮತ್ತು ಬ್ರಹ್ಮಾವರದ ಬಸ್ಸು ನಿಲ್ದಾಣದ ಬಳಿ ವೇದಿಕೆಯಲ್ಲಿ ಪ್ರದರ್ಶನಗಳನ್ನು   ಆಯೋಜಿಸಲಾಗುತ್ತಿದೆ.
  • ಈ ಮಹಾಭಿಯಾನವು ಕಳೆದ 15 ವರ್ಷಗಳಿಂದ ನಿರಂತರ ನಡೆದು ಬಂದಿದೆ. ಪ್ರತಿ ವರ್ಷ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲೂ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಬಂದು ಉಡುಪಿಯಲ್ಲಿ ನೆಲೆಸಿರುವ ವಿದ್ಯಾರ್ಥಿಗಳೂ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಜಾತಿ ಮತ ಭೇದವಿಲ್ಲದೆ ಎಲ್ಲರೂ ಭಾಗಿಯಾಗಿರುವುದು ಇನ್ನೊಂದು ವಿಶೇಷ.
  • ಗುರುಗಳ ಸಂಭಾವನೆ, ಪ್ರದರ್ಶನ ವೆಚ್ಚವೂ ಸೇರಿದಂತೆ ಟ್ರಸ್ಟ್ ಪ್ರತಿ ವರ್ಷ ರೂ. 15/- ಲಕ್ಷ ಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕರಿಂದ ಅನುದಾನ/ದೇಣಿಗೆ ಸಂಗ್ರಹಿಸಿ ವ್ಯಯಿಸುತ್ತಿದೆ.
  • ಯಕ್ಷಗಾನ ಕಲಿಕೆ ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೌಢಿಮೆ, ಪುರಾಣ ಜ್ಞಾನ, ಆತ್ಮವಿಶ್ವಾಸವನ್ನು ಅಭಿವರ್ಧಿಸಲು ಕಾರಣವಾಗಿದೆ.  ಯಕ್ಷಗಾನ ಕಲಿಕೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ಉತ್ತಮ ಫಲಿತಾಂಶ ಪಡೆಯುತ್ತಿರುವುದು ಅಧ್ಯಯನದಿಂದ ಧೃಢಪಟ್ಟಿದೆ. ಈ ಎಲ್ಲಾ ದೃಷ್ಠಿಯಿಂದ ಇದೊಂದು ಉಪಯುಕ್ತ ಯೋಜನೆಯಾಗಿದೆ. ನಮ್ಮ ನಾಡಿನ ಹೆಮ್ಮೆಯ ಈ ಕಲೆಯನ್ನು ಎಳೆಯರು ಕಲಿತು ಸಂಸ್ಕೃತಿ ಸಂವರ್ಧನೆಗೆ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗಿದೆ.
ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ:

ಗೌಪ್ಯತಾ ನೀತಿ | ನಿಯಮ ಮತ್ತು ಷರತ್ತುಗಳು

ಕೃತಿ ಸ್ವಾಮ್ಯ ಇ-2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿದೆ | ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ